ಆಸ್ಪ್‍ಡಿನ್, ಜೋಸೆಫ್ -
ಪುಡಿ ಮಾಡಿದ ಸುಣ್ಣಕಲ್ಲನ್ನೂ ಜೇಡಿಮಣ್ಣನ್ನೂ ಬೆರೆಸಿ ಅವೆರಡೂ ಒಂದುಗೂಡಿ ಗಟ್ಟಿಯಾಗುವವರೆಗೆ ಕುಲುಮೆಯಲ್ಲಿ ಸುಟ್ಟು ಪೋರ್ಟ್‍ಲ್ಯಾಂಡ್ ಸಿಮೆಂಟನ್ನು ತಯಾರಿಸಿದವ (1824). ಇದು ಪೋರ್ಟ್‍ಲ್ಯಾಂಡ್ ಪ್ರದೇಶದ ಬಂಡೆಗಳಲ್ಲಿನ ಕಲ್ಲಿನಂತೆ ಕಾಣುತ್ತಿದ್ದುದರಿಂದ ಈ ಹೆಸರಿಟ್ಟ.. ಕಿಟ್ಟದ ಹಾಗೆ ಗಟ್ಟಿಯಾದ ಹರಳುಗಳನ್ನು ಪುಡಿಮಾಡಿ ಬಂದ ಸಿಮೆಂಟನ್ನು ನೀರಿನಲ್ಲಿ ಬೆರೆಸಿದರೆ ಅದು ಬಹಳ ಗಟ್ಟಿಯಾಗುತ್ತದೆ. ಈಚೆಗೆ ಸಿಮೆಂಟಿನ ತಯಾರಿಕೆಯಲ್ಲೂ ಪರೀಕ್ಷೆಯಲ್ಲೂ ಅನೇಕ ಮಾರ್ಪಾಡುಗಳು ನಡೆದಿವೆ. ಈ ಸಾಮಗ್ರಿ ಬಳಕೆಗೆ ಬಂದ ಮೇಲೆ ಕಟ್ಟಡದ ಕಲೆಯಲ್ಲಿಯೇ ಒಂದು ಕ್ರಾಂತಿಯಾಯಿತು. ಸಿಮೆಂಟ್, ಮರಳು, ಸಣ್ಣದಾಗಿ ಒಡೆದ ಕಲ್ಲಿನ ಚೂರು-ಇವನ್ನು ಕ್ಲುಪ್ತವಾದ ಪರಿಮಾಣದ ನೀರಿನಲ್ಲಿ ಕಲಸಿ ಕಾಂಕ್ರೀಟನ್ನು ಮಾಡುತ್ತಾರೆ. ಆದರ ಒಳಗಡೆ ಉಕ್ಕನ್ನು ಹುದುಗಿಸಿ ಪ್ರಬಲಿತ ಕಾಂಕ್ರೀಟನ್ನು ಮಾಡಿ ಅದರಿಂದ ದೊಡ್ಡ ಕಟ್ಟಡಗಳನ್ನೂ ಸೇತುವೆಗಳನ್ನೂ ಕಟ್ಟುತ್ತಾರೆ. 

ರೋಮನರು ಅಗ್ನಿಪರ್ವತಗಳ ಬೂದಿಯನ್ನೂ ಸುಣ್ಣವನ್ನೂ ಒಂದು ಪ್ರಮಾಣದಲ್ಲಿ ಬೆರೆಸಿ ಪಸೊಲೇನ ಎಂಬ ಸಿಮೆಂಟನ್ನು ತಯಾರಿಸಿ ತಮ್ಮ ಬಂದರು ಮತ್ತು ನೀರಿನ ಸರಬರಾಜಿನ ಕಾಮಗಾರಿಗಳಲ್ಲಿ ಉಪಯೋಗಿಸುತ್ತಿದ್ದರು. ದೀಪ ಸ್ತಂಭಗಳನ್ನು (ಲೈಟ್ ಹೌಸಸ್) ಕಟ್ಟುವಾಗ ಸ್ಮೀಟನ್ ಒಂದು ಬಗೆಯ ಸಿಮೆಂಟನ್ನು ತಯಾರಿಸಿದ್ದ(1756), 1796ರಲ್ಲಿ ರೋಮನ್ ಸಿಮೆಂಟ್ ಎಂಬ ಸಿಮೆಂಟನ್ನು ಪಾರ್ಕರ್ ತಯಾರಿಸಿದ. 1813ರಲ್ಲಿ ವೈಕಾ ಎಂಬಾತ ಸಿಮೆಂಟನ್ನು ಪರೀಕ್ಷೆ ಮಾಡುವ ಕ್ರಮವನ್ನು ಕಂಡುಹಿಡಿದ. ಆದರೂ ಎಲ್ಲೆಲ್ಲೂ ಸಿಕ್ಕುವ ಸುಣ್ಣಕಲ್ಲು ಮತ್ತು ಜೇಡಿ ಮಣ್ಣಿನಿಂದ ಆಸ್ಟ್‍ಡಿನ್ ಸಿಮೆಂಟನ್ನು ಮಾಡುವವರೆಗೊ ಇದು ಸರ್ವತ್ರ ಬಳಕೆಗೆ ಬರುವುದು ಸಾಧ್ಯವಾಗಲಿಲ್ಲ. 
(ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ